Sunday, May 13, 2007

ತಳಮಳ

ವೇಷಾವೇಷಗಳ ದೇಶಾದ್ವೇಷಗಳ
ಕಡಲ ಒಡಲಿನೊಳಗೆ
ಕಂಡಿತೇನದು ಕಾಣದೇನದು
ಕಣ್ಣ ಕಣ್ಣುಗಳಿಗೆ.

ನೀವು ನಿಮ್ಮಗಳ, ತಮ್ಮ ತಾವುಗಳ
ಕಡೆಗೆ ನಡಿಗೆ ಕೊನೆಗೆ
ಗಳಿಕೆಗಳಿಕೆಗಳ ಸಿಕ್ಕರೆಣಿಕೆಗಳ
ತಳಮಳವೇ ಮಳಮಳವು.

ಕಳೆಗಳಿಗೆ ಕತ್ತಿ, ಬೆಳೆಗಳಿಗೆ ಬುತ್ತಿ
ಕೊಡದೆ ಕೊಡದು ಫಲವು
ತೊರೆ ತೊರೆಯದೆ ತನ್ಹುಚ್ಚ ತಾನು
ಎಲ್ಲೆಲ್ಲೋ ಹೊಯ್ತು ಕೊಚ್ಚಿ.

ತಾನೆ ತನುವಿಗೆ ಎಲ್ಲೆ
ಎಲ್ಲಿ ಮನಕೆ ಎಲ್ಲೆ
ಮಾನ ಮನಕೆ ಮೌನವೇ ಅಲ್ಲೆ.

ರಾಧೆ

ನೀನಾರು ಸರದಾರ
ನಾ ನೀನಿತ್ತ ಮುತ್ತು
ನೀನೂರು ಹರದಾರಿ
ನಾನಿತ್ತ ಕನಸ ಹೊತ್ತು

ನೀನುಕ್ಕು ನಾನದಿರು
ನಾನಧರ ನೀಮಧುರ
ನೀತೇಜ ನಾತಾವರೆ
ಚಂದಿರನೀ ನಾತಾರೆ

ನಾರಾಧೆ ನೀನಿರದೆ
ನೀನರ್ಧ ನಾನರ್ಧ
ತಾವಿರದೆ ನಾವಿದ್ದರೆ
ಇದ್ದರೇನಿರದಿದ್ದರೇನ್?

ಉಗಮಗಾನ

ಹರಿದಿದೆ ನಾದದ ನದಿ ನಿರಂತರ
ಆದಿಯ ಒಡಲಿನಿಂದುಗಮಿಸಿ
ಕರಗಿದೆ ತಾನ ಜಗವು ತಾ ಹಿಗ್ಗಿದಂತೆ

ದಿನವಿರದೆ ಇರುಳಿರದೆ ಗಳಿಗೆಗಳ
ಗಣಿಸದೆ ಗಮನಿಸದೆ ಕಾಲಗಳ
ಅರಿವಿರದೆ ಪರಿವಿರದೆ ಇತಿಮಿತಿಗಳ
ಮೀರದಂತೆ ಮುಗುಚಿ ಮಲಗಿತ್ತು ವಿಶ್ವ.

ಕಾಲ ಮಲಗಿತ್ತು ಶೂನ್ಯದ ಮಡಿಲಲ್ಲಿ
ಗಾನ ಮಲಗಿತ್ತು ಮೌನದೊಳಗೆ
ರಾಗವೇನಿರದೆ ಜಗವು ಶವವಾಗಿರಲು
ನಾದ ತಾ ಮೆಲ್ಲಗೆ ಮೈ ಮುರಿಯುತ್ತಿತ್ತು.

ಅಮೃತ ಗಳಿಗೆ ಸಿಡಿಸಿತು ಜಗಕೆ
ಜೀವದಾನ ನಾದದುದಯ ದಿನದ
ನೃತ್ಯಾರಂಭ ಸಂಭ್ರಮಗಾನ
ಅರಳಿಮತ್ತರಳಿ ಹರಿಯಿತು ನಾದದ ನದಿ.

ತನನ ತಾನ

ತನನ ತಾನ ತಂತಾನ
ಅವನೀಗೆ ಇವನು ಬಂದಾನ
ನಾನಿಂದ ಕಂದನೆಂದಾನ
ಅಳತಾನ ಒಳಗ ನಗತಾನ

ನೆನೆಸ್ಯಾನ ಒಲವ ಹರಿಸ್ಯಾನ
ಕನಸೀಗೆ ನನಸ ಬೆಸೆದಾನ
ಮೆನಸೀಗೆ ಕನಸ ಹೊಸದಾನ
ಕರೀತಾನ ಒಳಗ ಕಿರಿತಾನ

ಭೋಗ ಭಾಗಿಸಲಿ, ಗುಣ ಗುಣಿಸಲಿ
ಯೋಗ ಕೂಡಲಿ, ಕೊಳಕ ಕಳಿಯಲಿ
ಅರಿವನರಸಲಿ ಬೆಂದು ಬೆಳೆಯಲಿ
ಇಂದಿನಿಂದೆಂದು ನಂದದಿರಲಿ
ತಾನ ತನ್ನಿಂತಾನ ನಿನಾದವಾಗಲಿ.

ಓಕುಳಿ

ಕೊಲ್ಲು ಕೊಲ್ಲೆನುತಾ
ಕೊಚ್ಚಿಹಾಕು ನೀನೆನುತ
ರೊಚ್ಚಲಿ ಚಿಮ್ಮಿಸಿ ಚೆಲ್ಲಿದರಯ್ಯೋ
ನೆತ್ತರೋಕುಳಿಯ.

ಮುಸುಲ ನೀನೆನುತಾ
ಅಸಲು ಮನುಜನಲ್ಲೆನುತ
ಕುಲವನಳಿಸಿ ಕುಣಿಯೆಂದೆನುತ
ಚೆಲ್ಲಿದರೋಕುಳಿಯ.

ಮುಂದಕಿನ್ನೆಂದೂ
ಹಿಂದು ನಂದಿಬಿಡಲೆಂದು
ಗುಂಡಿಗೆ ಬಗೆದು ಚೆಲ್ಲಿದರಯ್ಯೋ
ನೆತ್ತರೋಕುಳಿಯ.

ಟೆರೆರೆಂದು ಕಿರುಚಿ
ಖರೆಯ ಎಡೆಬಿಡದೆ ತಿರುಚಿ
ಸದ್ದಾಮದ್ದ ಮೂತಿಯ ತೋರಿ
ಎರಚಿದರೋಕುಳಿಯ.

ಕಾರು ಬಾರೆನುತ
ಬೋರು ಒಲ್ಲೆ ಲೈಫೆನುತ
ಹೋಮಿ-ಸುಯಿಸೈಡೆಂದೆನುತ
ಚೆಲ್ಲಿದರೋಕುಳಿಯ.

ಅಳಿಯದೆ ಉಳಿವವರು
ಜಗದಿ ಯಾರಯ್ಯಾ ಇಹರು
ಜಗದ ಜನಕನ ನಾಮದಿ ನಿತ್ಯ
ನೆತ್ತರೋಕುಳಿಯೊ.

ಬರಿ(Bury)

ಬರಿ ಬರಿ ನೀ ಬರಿ ಬರಿ
ಅರಳು ಹುರಿದ್ಹಾಂಗ ಹುರಿದು ಬರಿ
ನೀರು ಹರಿದ್ಹಾಂಗ ಹರಿದು ಬರಿ
ಎಲ್ಲಾ ಅರಿತ್ಹಾಂಗ ನುರಿತು ಬರಿ
ಬರಿ ಬರಿ ನೀ ಬರಿ ಬರಿ

ಮನದ ಕಥೆಯಾ ನೀ ನೋಡಿ ಬರಿ
ಕತೆಗಾರ ಹೇಳಿದ್ದನ್ನ ಕೇಳಿ ಬರಿ
ನಟನು ನಟಿಸಿದ್ಹಾಂಗ ನಟಿಸಿ ಬರಿ
ಜನಕೆ ಬೇಕೆನಿಸಿದ್ಹಾಂಗ ಜನಿಸಿ ಬರಿ
ಬರಿ ಬರಿ ನೀ ಬರಿ ಬರಿ

ಬರ ಭಾವಕ್ಕ ಬರದೆ ಬರೆದೇ ಬರಿ
ಬರಿದಾಗೂತನ ಭರ ಭರ ಬರಿ
Bury ಮಾಡೂತನ ಛಲ ಬಿಡದೆ ಬರಿ
ನಾಕ ನರಕ ಮರೆತು ಇಲ್ಲೆ ಇದ್ದು ಬರಿ
ಬರಿ ಬರಿ ನೀ ಬರಿ ಬರಿ.

Friday, May 11, 2007

ನಮ್ಮ ಜಗ

ಇರಲಿರಾಕಿಲ್ಲ ಇರಾಕಿಲ್ಲ
ನರನರಕೆಲ್ಲ ಇಲ್ಲಿರಾಕಿಲ್ಲ

ಸದ್ದಾಮದ್ದುಗುಂಡ ಕೂಡಿಹ
ನೆಂದು ಬುಸ್ ಬುಸ್ಗುಟ್ಟಿ ಕಾರಿ
ಹದ್ದು ಮೀರಿ ಯುದ್ಧ ಸಾರಿ
ಉದ್ದ ತಿಳಿಯದೆ ಹೊಳೆಗೆ ಹಾರಿ

ಸುಳ್ಳ ಕಂತೆಯೇ ಸತ್ಯವೆಂದು
ಕಳ್ಳಮನಸ್ಸಿಗೆ ತಿಳಿಸಿ ಹೇಳಿ
ಬೆಳ್ಳ ಸೇನೆಯ ಕಟ್ಟಿಕೊಂಡು
ದಳ್ಳುರಿಯ ಹಚ್ಚಿದನವನಿಗೆ