Thursday, July 13, 2006

ಜಾಲ

ಜಾಲ ಕೋಟಿ ಜಾಲ ಹೆಣಿದಿವೆ ಜಗವ
ಕುಣಿಸಿವೆ ಹಣಿಸಿವೆ ಮಣಿಸಿವೆ ಜಗವ.

ಹೆಜ್ಜಾಲ ಕಿರಿಜಾಲ ಮಾರ್ಜಾಲ
ನೂರ್ಜಾಲ ನೂರಾರ್ಜಾಲ
ಹೆಚ್ಚಲು ಕಚ್ಚಲು ಚುಚ್ಚಲು
ಸುತ್ತಲು ಮುತ್ತಲು ಎತ್ತಲೂ.

ತಂತ್ರ ಸ್ವತಂತ್ರ ಪರತಂತ್ರ
ಅಂತರ ನಿರಂತರ ಮಂತ್ರ
ಬಾನು ಭುವಿ ಭಾನು ನಕ್ಷತ್ರ
ಅಲೆಯ ಬಲೆಯಿಂದ ತಾ ಪ್ರತ್ಯಕ್ಷ.

ಮನವನಾವರಿಸಿ ಮಾನವನಾವರಿಸಿ
ಅರಿಯದೆ ಎಲ್ಲೆಲ್ಲೂ ಜಾಲ
ಅವತರಿಸಿ ನೂರಾರು ತೆರೆ ತರಿಸಿ
ಸುರಿಸಿ ಸರಸ ವಿರಸ ಸವಿರಸ.

ಜೀವ ಭಾವಾಭಾವ ನೋವ ನಲಿವ
ಉಲಿವ ಸುಲಿವ ಮನವ ತನುವ
ಕಾಮ ಕರ್ಮ ಧರ್ಮ ಮರ್ಮ
ಎಲ್ಲ ಚರ್ಮದೊಳಗಿನ ಜಾಲ
ಮಿಥ್ಯ ಜಾಲ ಮಿಥ್ಯ ಎಲ್ಲಿ ಸತ್ಯ?

ಚೆಲುವೆ

ಚೆಲುವೆ ನಿನ್ನ ಚೆಲುವ ಬೀರಲೆಂದೆ
ತಂಗಾಳಿಗೆ ಮೈಯೊಡ್ಡಿ ನಿಂತಿರುವೆಯಾ?
ಚೆಲುವ ನಿನ್ನ ಚೆಲುವ ಹೀರಲೆಂದೇ
ಅಂಗಳಕೋಡೋಡಿ ಬಂದೆಯಾ?

ಹೊಲದೊಳಗಿನ ಬೆಳೆಗಳಲ್ಲಿ ಒಂದಾಗಿ ನಿಂತೆಯಾ?
ಬೆಳೆಯೊಳಗೆ ಹಸಿರಾಗಿ ಹೊಸ ಉಸಿರ ಪಡೆವೆಯಾ?

ನಸು ನಾಚಿ ತಲೆ ತಗ್ಗಿಸಿ ಕೈ ಹೊಸೆಯುತ ನಿಂತೆಯಾ?
ಹುಸಿ ಮುನಿಸನು ತೋರುತಲಿ ಕೈ ಚಾಚಿ ಕರೆದೆಯಾ?

ಮನದಾಳದಿ ಏನಡಗಿದೆ ನೀನೆನಗೆ ತಿಳಿಸೆಯಾ?
ಮನ ಗೆದ್ದೆ ನಾ ಸೋತೆ, ಅಥವಾ ನೀನೆನಗೆ ಸೋತೆಯಾ?

ಭೂಮಿ

ಬಾಗಿಲ ಬಳಿ ಬಂದು
ಮನದ ಕದವ ತಟ್ಟಿ
ನೀನೆನ್ನ ಕಣ್ಣಿಗೆ ಕಟ್ಟಿ
ಕನಸ ಲೋಕವ ನಾ ಮುಟ್ಟಿ.

ಬೆಂದ ಭೂಮಿ ಬಿಟ್ಟು ಬಾಯಿ
ಬರದಿ ಬಿರಿದು ಕಾದ ಮೈ
ಬಾನ ಕಡೆಗೆ ಕಣ್ಣ ಚಾಚಿ
ಭರದಿ ಸುರಿಯಂದಂಗಲಾಚಿ

ಮುತ್ತ ಮಳೆಯನಿಳೆಗೆ ಸುರಿಸು
ನಿತ್ಯತೃಪ್ತ ಹೊಳೆಯ ಹರಿಸು
ಸುಪ್ತಚಿತ್ತಕೆ ಜೀವ ಬರಿಸು
ಮತ್ತ ಮತ್ತ ಮುತ್ತಿ ಹನಿಸು

ನೀನಾರು ಸರದಾರ
ನಾ ನೀನಿತ್ತ ಮುತ್ತು
ನೀನೂರು ಹರದಾರಿ
ನಾನಿತ್ತ ಕನಸ ಹೊತ್ತು

ನಾರಾಧೆ ನೀನಿರದೆ
ನಾನರ್ಧ ನೀನರ್ಧ
ತಾವಿರದೆ ನಾವಿದ್ದರೆ
ಇದ್ದರೇನಿರದಿದ್ದರೇನು.

ನೀನುಕ್ಕು ನಾನದಿರು
ನಾನಧರ ನೀಮಧುರ
ನೀನೀರು ನಾತಾವರೆ
ಚಂದಿರನೀ ನಾತಾರೆ.

ಇಂದು

ಮನದ ಮುಚ್ಚಳ ತಗೀಬೇಕ
ಇದ್ದರಿಂದ ನಾವು ಇರಬೇಕ
ಇಂದು ಇದ್ದರ ಇದ್ದ್ಹಾಂಗ
ಇರದೆ ಹೋದರೆ ಸತ್ತ್ಹಾಂಗ

ಇಂದೇ ತಿಳಿಯದು ಮುಂದ ಕಾಣದು
ಅಂದು ನಂದಿದ ಕತ್ತಲೆಯ ನಾಡದು
ಬಂದು ನಿಂತರ ಬಾಳಿರದ ಬಾಳದು
ಬೆಂದು ಬೆಳೆದು ಬಾಳಿದರ ಬಾಳದು

ಅಂದ ಚಿಪ್ಪಿನ್ಯಾಗ ಇಂದ ಮುತ್ತೊಂದು
ಕಂಡಿತೊಂದೇ ಕ್ಷಣ ತಾ ಹೊರಬಂದು
ಕೊಂಡಿ ಕಳಚಿತೋ ಕಣ್ಗೆ ಮುತ್ತಿಗೆ
ನಿಂತು ಮುತ್ತಿತು ಮುತ್ತು ಮನಸಿಗೆ

ಹೊಳೆಯ ಹರಿವಲ್ಲಿ ಮುತ್ತು ಮಾಯವೋ?
ತಳಗ ಬಳಗದ ಸಂಗ ಸ್ನೇಹವೋ?
ಹಿಂದ ಸರಿಯಿತೋ, ಮುಂದಕ್ಹರಿಯಿತೋ?
ಒಳಗ ಒಳಗ ತಿಳೀದ್ಹಂಗ ಕಳೆಯಿತೋ?

ಕಾಲ ಕಾಲಿಗೆ ಗತಿ ದಿಕ್ಕು ಯಾವುದೋ?
ಕಾಲಕಾಲಕ್ಕೆ ಕಾಲ ಕಾಲವೋ!
ಕಾಲದೊಳಗೆ ಜಗವೆಲ್ಲ ಕಾಲವೋ!
ಕಾಲದೊಳಗೆ ಹೊಸ ಕಾಲ ಜನ್ಮವೋ!