Saturday, February 11, 2023

ಕರ್ಣ

ಆಡಿಗಡಿಗೆ ನಡುನಡುಗಿ
ನೋಡುತಲಿ ತಿರುತಿರುಗಿ
ಮನದೊಳಗೆ ಮರಮರುಗಿ
ಕಂತಿಹ ಕುಂತಿ ಕೊರಗಿ.
 
ನಾಡಿನಾ ಗಡಿ ದಾಟಿ
ಕಾಡಿನ ಕಡೆಗೋಡಿ
ತನ್ನೊಡಲ ಕುಡಿಯ ತನ್ನ
ಮಡಿಲಲೊಳೆತ್ತಿ.
 
ರವಿಯ ಒಲವಿಂದ 
ಚಿಗುರಿಬಂದಿಹ ಕಂದ 
ರವಿಯು ಮುಳುಗಿರಲು 
ಬಾಳೆಲ್ಲ ಇರುಳು. 

ಇರುಳಿನಾ ನೆರಳಲ್ಲಿ 
ಕರುಳ ಬಳ್ಳಿಯನೆಲ್ಲಿ 
ತೊರೆದು ತೆರಳಲಿ ಎಲ್ಲಿ 
ಮೊರೆದು ಮರುಗಿದಳಲ್ಲಿ. 

ಗಂಗೆಯಾ ದಡ ಸೇರಿ 
ಕಂಬನಿಯ ನದಿ ಜಾರಿ 
ತೊರೆಯಲೇ ತೊರೆಯದಿರಲೆ? 
ದ್ವಂದ್ವದಲಿ ಮನವು ಮುದುರಿ. 

ಬಾಳೊಂದು ತನಗುಂಟು 
ಮಗುವಿಗೂ ಬಾಳುಂಟು 
ಬಳಿಯಲಿದ್ದರೆ ಹಾಳು 
ಇಬ್ಬರಾ ಬಾಳು. 

ಮಾನವೇ ಮಿಗಿಲಾಗಿ 
ಮಮತೆ ಮೆಲ್ಲನೆ ಕರಗಿ 
ಮನವು ವಜ್ರವೇ ಆಗಿ 
ಮಗನನೊಪ್ಪಿಸಿದಳು ಗಂಗೆಗೆ. 

ಯುಗಯುಗಗಳುರಿಳಿದರೂ 
ನೂರಾರು ಕರ್ಣರು ಕುಂತಿಯರು 
ಇನ್ನೂ ಜನಿಸಿರುವ 
ನಮ್ಮ ಮಹಾಭಾರತವೇ ಧನ್ಯ.