(ಈ ಹಾಡನ್ನು ಬರೆದವರು ಯಾರೋ ನನಗೆ ತಿಳಿಯದು. ನಾ ಚಿಕ್ಕವನಾಗಿದ್ದಾಗ ನಮ್ಮ ಅಜ್ಜಿ ರಾಧಕ್ಕಮ್ಮ ಹಾಡುತ್ತಿದ್ದರು. ಈಗ ಅವರಿಲ್ಲ. ಅಮ್ಮನಿಂದ ಆಸ್ತಿಯಾಗಿ ಪಡೆದ ನಮ್ಮ ದೊಡ್ಡಮ್ಮನಿಂದ ಕೇಳಿ ಬರೆದದ್ದನ್ನು ಬರೆದಿರುವೆ. ಅಲ್ಲಲ್ಲಿ ತಪ್ಪಿರಬಹುದು. ಮುಂದೊಮ್ಮೆ ಅವನ್ನು ಸರಿಪಡಿಸುವೆ - ದೊಡ್ಡಮ್ಮನನ್ನು ಭೇಟಿಯಾದಗ.)
ಸಾರಿ ಹೇಳುವೆನು ನಾನು ವೀರ ಮಾರುತಿ ದೈತ್ಯ ಫಿರಂಗೇರು ಮಾಡಿದಂತ ಚಮತ್ಕಾರ
ಕೂರ ದೈತ್ಯನ ಮರ್ಜಿನ ಪಾರುಮಾಡು ಎಂದು ನಾ ಮುಗಿದು ಬೇಡುವೆನು ಭಯಕರ
ರೈಲು ವಿಸ್ತಾರವನು ಇನ್ನು ಮುಂದೆ ಹೇಳುವೆನು ಕೈಲಾದ ಮಟ್ಟಿಗೆ ಕೇಳ್ರಿ ಪೂರ
ಸಾಲಗಾಡಿ ಮಾಲಗಾಡಿ ರೂಲಗಾಡಿ ಪೂಲಗಾಡಿ ಗೂಡಸ ಕರ್ನಾಟಕ ಹಲವು ತರ
ಧದಿಗಿಂದ ಗಾಡಿ ಕದಿಯಿಂದ ಓಡುವಾಗ ಕಿವಿಯೊಳಗ ಗಾಳಿ ಬರರರ
ಗಡಗಡಗಡ ಎಂದು ಶಬ್ದ ಮಾಡುತದೆ ಇಂದ್ರ ವೇಗದತ್ತೆ ಝೇಂಕಾರ
ಒಂದು ತಾಸಿಗೆ ನೂರು ಮೈಲು ಚಲಿಸುವುದು ಕೇಳಿ ಈ ರೈಲು
ವಾಯುಯೋಗ ಮನೋಯೋಗ ಸುಸ್ತಾರ ಮಾಡಿಬಿಟ್ಟಿರುವರು ಹರಹರ
ಮುಂದಿನ ಬಂಡಿಯೊಳಗಿನ ಕೀಲು ತಿರುವಿ ಬಿಟ್ಟರು ಹಿಡಿಯುವುದು ದಿಗಿಲು
ಧ್ವನಿ ಮಾಡಿ ಕೂಗುವುದು ಕಲಲಲ ಎಂಥಾ ಬುದ್ಧಿ ಕೊಟ್ಟರು ಅಮಲೋಲ
ಪುತ್ರವಂತಿ ಕೇಳಿ ವಿಚಿತ್ರವಾದನಲ್ಲ ಸೂತ್ರವ ನೋಡಿ ಎನ್ನ ಮನಕೆ
ಯಜ್ಞವಂತಿ ಕೇಳು ಮಗ್ನನಾದೆನಲ್ಲ ಅಗ್ನಿ ಕಾಷ್ಟದಿಂದ ಇಂಜಿನ್ ಸಾಗುವುದಕೆ
ಕೊಪ್ಪಳದಿಂದ ಗಾಡಿ ಒಳ್ಳೆ ಸಪ್ಪಳದಿಂದ ಓಡುವಾಗ ಅಪ್ಪ ಕೇಳ್ರಿ ಸ್ಟೇಷನ್ನಿನ ಹೆಸರ
ಹುಲಗಿಲಿಂದ ಹೊಸಪೇಟೆ ಗಾದಿಗನೂರು ತೋರಣಗಲ್ಲು ದರೋಜಿ ಕುಡತಿನಿ ಎಂಬ ಊರ
ಎಂದು ನೋಡಿದಿಲ್ಲ್ರಿ ನಾವು ಮುಂದ ಬಂತು ಬಳ್ಳಾರಿ ಕಂಟೋನ್ಮೆಂಟು ದಂಡಿಪೇಟ ಎಂಬ ಹೆಸರ
ಏನು ಶುದ್ದ ಬಂಗ್ಲೆಗಳು ಕಾಣಸ್ತಾವ್ರಿ ಕಣ್ಣಿಗೆ ಶಾಂಪಿನಂಗಡಿ ಪಗಡಿಸಾಲು ಬಜಾರ
ಕಂಡಕಂಡಲ್ಲಿ ಹಾರಿಕೋತ ಚಂಡನಾಮಕ ಬಂಡಿ ನಿಂತಿತು ಅಲ್ಲೊಂದು ಜರ್ರ
ಕಿಂಡಿಯೊಳಗೆ ನೋಡಿ ನನಗೆ ಉಂಡಗೆ ಆಯಿತಲ್ರಿ ದುಂಡು ಟೋಪಿ ಇಟ್ಟುಕೊಂಡ ಸಾಹೇಬರ
ಅರ್ಧ ತಾಸು ಮೀರಿದ ಮೇಲೆ ಗರ್ಜಿಲಿಂದ ಹಿಂದಕ್ಕೆ ಸಮ ಮುಂದಕ್ಕೆ ನಡೆದಿತು ಭರರರರ
ಕತ್ತಲು ಬಿತ್ತಲು ಕಣ್ಣಿಗೆ ಮುಂದೆ ದೀಪದ ಬೆಳಕು ಅದರ ಹಿಂದೆ ಇರಬೇಕ್ರಿ ಬಹಳ ಹುಷರಿಂದ
ಟಿಕೀಟು ಕೇಳುವರು ಬಂದು ಬಂದು ಸಾಲುಗೊಂಡು ಮಾಲೊಂಡು
ರೋಲ್ ಮೇಲೆ ನಿಂತಿರುವಾಗ ಕೀಲಿ ಹಾಕಿ ಮುತಂತಿ ಮಾಡೂವರು ಟೈಮು ಸರಿಯಾಗಿ
ಗಾಡಿ ಸ್ಟೇಷನ್ ಮೇಲೆ ನಿಂತಿರುವಾಗ ಬಹಳ ಬಹಳ ಜನ ಬಂದು ಹತ್ತುವರು
ಎತ್ತರವಾದ ಗಾಡಿ ಮೇಲೆ ಒತ್ತರದಿಂದ ಜನ ಹೋಗಿ ತತ್ರ ಬಿತ್ರ ಮಾಡಿ ಹೋಗಿ ಕೂಡುವರು
ಎತ್ತ ನೋಡಿದರು ಗಾಡಿ ಜತ್ತವಾಗಿ ನೋಡಿ ನಿಂತಿರುವುದು ಹತ್ತೆನಂದರ ಖಾಲಿ ಇಲ್ಲ ಭರ್ಪೂರ
ಆರು ಗಂಟೆ ಬಡಿದ ಮೇಲೆ ಪಾರು ಆಯಿತಲ್ರಿ ಗಾಡಿ ದಾರ ಕಣ್ಣಿಗೆ ಕಾಣಸ್ತೋಯಿತು ಬಹಳ ದೂರ
ಹಗರಿ ಸಾಲು ದಾಟಿದ ಮೇಲೆ ಕಾರಿಕಲ್ಲ ವೀರಪುರ ಬೇವಿನಾಳು ಬಂಟನಾಳು ಎಂಬ ಊರ
ಗುಂತಕಲ್ಲು ಜಂಕ್ಷನ್ನಿಗೆ ಎಂಥ ಜಲ್ದಿ ಬಂದೆವಲ್ರಿ ಕುಂತು ಕುಂತು ಇರೋದ್ರಾಗೆ ಚಮತ್ಕಾರ
ಜಂಕ್ಷನ್ ನೋಡಿ ನನಗ ದಂಗು ಬಡೆದಂತಾಯಿತಲ್ರಿ ಭಂಗಿ ಕುಡಿತಂತಾಯಿತಲ್ರಿ ಎಚ್ಚರ.