Wednesday, September 04, 2024

ಇಚ್ಛಾಮರಣ - ನಿಜವಾಗಿಯೂ ವರವೇ?

ಶಾಂತನು ಸತ್ಯವತಿಯ ಪ್ರೇಮ ಪಾಶದಲ್ಲಿ ಸಿಲುಕಿದ್ದ. ಅವಳಪ್ಪ ಕೆಲವು ಶರತ್ತುಗಳನ್ನು ಹಾಕಿದ, ಮಗಳನ್ನು ಮದುವೆ ಮಾಡಿ ಕೊಡಲು. ರಾಜ್ಯ ಸತ್ಯವತಿಯ ಸಂತತಿಗೇ ಬರಬೇಕು ಎಂದು ಹಟ ಹಿಡಿದ. ಈ ಶರತ್ತಿಗೆ ಶಾಂತನು ಒಪ್ಪದಾದ. ಸತ್ಯವತಿಯನ್ನು ಮನಸ್ಸಿನಿಂದ ತಗೆದು ಹಾಕಲು ಆಗಲಿಲ್ಲ. ಕೊರಗಿದ ಒಳಗೊಳಗೆ. ಮೊದಮೊದಲಿಗೆ ದೇವವ್ರತನಿಗೆ ತಂದೆಯ ಚಿಂತೆಯ ಕಾರಣ ತಿಳಿಯಲಿಲ್ಲ. ತಂದೆ ಹೇಳಲಿಲ್ಲ. ಮಂತ್ರಿಗಳನ್ನು ವಿಚಾರಿಸಿದಾಗ ವಿಷಯ ತಿಳಿಯಿತು. ದೇವವ್ರತ ತಡ ಮಾಡಲಿಲ್ಲ. ಕೂಡಲೇ ಮೀಂಗುಳಿಗರ ತಾಣಕ್ಕೆ ತನ್ನ ರಥದಲ್ಲಿ ಧಾವಿಸಿದ. ಸತ್ಯವತಿಯ ತಂದೆಯ ಕಂಡ. ಸತ್ಯವತಿ ಹಾಗೂ ಶಾಂತನುವಿನ ಮಕ್ಕಳಿಗೆ ರಾಜ್ಯ ಲಭಿಸುವುದೆಂದು, ತಾನು ಅದಕ್ಕೆ ಅಡ್ಡ ಬರುವುದಿಲ್ಲವೆಂದು ಮಾತು ಕೊಟ್ಟ. ಅವಳ ತಂದೆಗೆ ಆದರೂ ಸಮಾಧಾನವಾಗಲಿಲ್ಲ. ನೀನು ರಾಜ್ಯವನ್ನು ಬಿಟ್ಟು ಕೊಡಬಹುದು, ಆದರೆ ನಿನ್ನ ಮಕ್ಕಳು ಹಸ್ತಿನಾಪುರದ ಸಿಂಹಾಸನಕ್ಕೆ ತಾವೇ ವಾರಸುದಾರರೆಂದು ಪಟ್ಟು ಹಿಡಿಯಬಹುದು, ಮತ್ತು ನೀನು ಅವರ ಪಕ್ಷವನ್ನೇ ವಹಿಸುತ್ತೀಯ ಎಂದು ಅನುಮಾನ ವ್ಯಕ್ತ ಪಡಿಸಿದ. ಅದಕ್ಕೆ ದೇವವ್ರತ ಆ ಜನ್ಮ ಬ್ರಹ್ಮಚಾರಿಯಾಗಿ ಉಳಿಯುವುದಾಗಿ ಪ್ರತಿಜ್ಞೆ ಮಾಡಿದ. ಪುಷ್ಪವೃಷ್ಟಿಯಾಯಿತು. ಅವನು ಭೀಷಮನೆಂದು, ಅವನ ಪ್ರತಿಜ್ಞೆ ಭೀಷ್ಮ ಪ್ರತಿಜ್ಞೆಯಂದು ವಿಖ್ಯಾತವಾದವು. ಶಾಂತನು ಬಂದ. ಅವನ ಬಾಯಿ ಕಟ್ಟಿದಂತಾಗಿತ್ತು. ಮಗ ತನ್ನ ಪ್ರೇಮಕ್ಕಾಗಿ ತನ್ನ ರಾಜ್ಯ, ಯವ್ವನ ಮತ್ತು ತನ್ನ ಭವಿಷ್ಯವನ್ನೇ ತ್ಯಾಗ ಮಾಡಿದನಲ್ಲ ಎಂದು ಕೊರಗಿದ. ತ್ಯಾಗ ಮಾಡಿದ ಮಗನಿಗೆ ಏನಾದರೂ ವರ ಕೊಡಬೇಕೆಂದುಕೊಂಡ. ಒಂದು ವರವ ಕೊಟ್ಟ - ಇಚ್ಛಾ ಮರಣಿಯಾಗೆಂದು ಹರಸಿದ. ಕೊಡುವುದು ಕೊಟ್ಟ. ಎಂಥ ವರವ ಕೊಟ್ಟ! ಯಾರಾದರೂ ಆರೋಗ್ಯವನ್ನೋ, ಐಶ್ವರ್ಯವನ್ನೋ, ಮತ್ತೇನನ್ನಾದರೂ ಕೊಡಬಹುದಿತ್ತು. ಅದೆಲ್ಲ ಬಿಟ್ಟು, ನಿನ್ನ ಸಾವಿನ ಸಮಯವನ್ನು ನೀನೆ ನಿರ್ಧರಿಸು ಎಂದು ವರ ಕೊಟ್ಟ. ಯಾಕೆ ಕೊಟ್ಟ ಇಂತಹ ವರ? ಇದರ ಹಿಂದಿನ ಮರ್ಮವೇನು? ಈ ಕೆಳಗಿನ ಕಾರಣಗಳಿರಬಹುದು: ೧. ಭೀಷ್ಮ ಗಂಗಾ ಪುತ್ರ. ಅವಳು ಭೀಷ್ಮನಿಗಿಂತ ಮೊದಲು ಹುಟ್ಟಿದ ಏಳು ಮಕ್ಕಳನ್ನು ನದಿಯಲ್ಲಿ ಮುಳುಗಿಸಿ ಕೊಂದಿದ್ದಳು. ಭೀಷ್ಮನನ್ನು ಮುಳುಗಿಸಲು ಹೊರಟಾಗ, ಗಂಗೆಯ ಯಾವ ಕಾರ್ಯಗಳನ್ನು ಪ್ರಶ್ನಿಸೆನು ಎಂದು ಕೊಟ್ಟ ಮಾತ ಮೀರಿ ಅವಳನ್ನು ತಡೆದನು. ಆಗ ಗಂಗೆ - ಶಾಪದಿಂದ ತಾನು ಧರೆಗೆ ಬಂದದ್ದು, ಶಾಪಗ್ರಸ್ತರಾದ ಎಂಟು ದೇವತೆಗಳನ್ನು ತಾನು ಹೆರುವೆನೆಂದು ಮಾತಿತ್ತು, ಹೆತ್ತ ಕ್ಷಣವೆ ಗಂಗೆಯಲ್ಲಿ ಅವರ ಜನ್ಮಕ್ಕೆ ಮುಕ್ತಿ ಕೊಡಿಸಿ ಶಾಪ ವಿಮೋಚನೆಗೊಳಿಸುವುದಾಗಿ ಹೇಳಿದ್ದ - ಎಲ್ಲ ವೃತ್ತಾಂತವನ್ನು ಹೇಳಿದಳು. ಎಂಟನೆಯ ಮಗುವನ್ನು ವಿಮೋಚನೆಗೊಳಿಸುವ ಮೊದಲು ಶಾಂತನು ಅವಳನ್ನು ಪ್ರಶ್ನಿಸಿದನಾದ್ದರಿಂದ ಅವಳು ಆ ಮಗುವಿಗೆ ವಿಮೋಚನೆ ಕೊಡಿಸದಾದಳು. ಆದರೆ ಅವಳ ಶಾಪ ಅಲ್ಲಿಗೆ ಮುಕ್ತಾಯವಾಯಿತು. ಅವಳು ಆ ಮಗುವಿಗೆ ದೇವವ್ರತ ಎಂದು ಹೆಸರಿಟ್ಟು, ಗುರು ಬೃಹಸ್ಪತಿಗಳ ಬಳಿ ವಿದ್ಯೆ ಕಲಿಸಲೆಂದು ತನ್ನೊಡನೆ ಕರೆದೊಯ್ದಳು. ವಿದ್ಯೆ ಕಲಿತು ತಿರುಗಿ ಬಂದ ದೇವವ್ರತ ಈಗ ಭೀಷ್ಮನಾದ. ಶಾಪ ವಿಮುಕ್ತನಾಗೆಂದು ಭೀಷ್ಮನಿಗೆ ಇಚ್ಛಾಮರಣೀಯ ವರವನಿತ್ತನೇ ಶಾಂತನು? ೨. ಲಭಿಸಬೇಕಾದ ರಾಜ್ಯವನ್ನು ಕಳೆದುಕೊಂಡು, ವಿವಾಹವಾಗನೆಂದು ಪ್ರತಿಜ್ಞೆ ಮಾಡಿದ ಮನುಷ್ಯನಿಗೆ ಏನು ಸುಖವಿದೆ ಬಾಳಿನಲಿ? ಯೋಗ್ಯತೆ ಇದ್ದು ಇನ್ನೊಬ್ಬರ ಆಳ್ವಿಕೆಯ ಅಡಿ ಇರಬೇಕು. ಮಕ್ಕಳಿರದ ಮನುಷ್ಯನಿಗೆ ಎಲ್ಲಿಯ ಸುಖ, ಎಲ್ಲಿಯ ಮುಕ್ತಿ? ನರಕಮಯವಾದ ಈ ಬದುಕಿಗಿಂತ ಸಾವೇ ಮೇಲು. ಬಾಳಿಗೆ ಅಂತ್ಯ ಹಾಡೆಂದು ಈ ವರವನಿತ್ತನೇ ಶಾಂತನು? ೩. ಬಾಳಲ್ಲಿ ನಿರ್ಣಯಿಸಲು ಏನೂ ಉಳಿದಿಲ್ಲ. ಸಾವಾದರೂ ನಿನ್ನ ಇಚ್ಚೆಯಂತೆ ಇರಲಿ. ಶುರು ಹಾಗೂ ಜೀವನ ನಿನ್ನ ಕೈಯ್ಯಲ್ಲಿಲ್ಲದಿದ್ದರೂ ಅಂತ್ಯ ವಾದರೂ ನಿನ್ನ ಮನದಂತೆ ಇರಲಿ ಎಂದು ಈ ವರವನಿತ್ತನೇ ಶಾಂತನು? ತನ್ನ ಕೊನೆಯ ತಾನೇ ನಿರ್ಣಯಿಸುವುದು ಒಂದು ವರವೇ? ಜನಕ್ಕೆ ಸಾವಿನ ಭಯ ಸದಾ ಇರುತ್ತದೆಯೇ? ಸಾವು ಖಚಿತ ಎಂದು ತಾರ್ಕಿಕವಾಗಿ ಆಲೋಚಿಸಿದಾಗ ಎಲ್ಲರೂ ಒಪ್ಪುತ್ತಾರೆ. ಸಾಯುವುದಕ್ಕೆ ಈಗ ಸಿದ್ಧವಾಗಿರುವೆಯಾ ಎಂಬ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿದೆಯೇ? ನಾಳೆಯಿಂದ ನಾನಿರದಿದ್ದರೆ ನಮ್ಮ ಮನೆಯವರ ಗತಿ, ನನ್ನ ಮಕ್ಕಳು, ನನ್ನ ಗಂಡ/ಹೆಂಡತಿ ಇವರೆಲ್ಲಾರನ್ನು ಸಲಹುವರಾರು. ಅವರಿಗಾಗಿ ಬದುಕುತ್ತಿದ್ದೇನೆ. ಅವರು ಒಂದು ನೆಲೆಗೆ ನಿಂತ ಮೇಲೆ ಸಾವು ಬಂದರೇನಡ್ಡಿಯಿಲ್ಲ ಎಂದು ಸಾವಿನ ಪ್ರಶ್ನೆಯನ್ನು ಮುಂದಕ್ಕೆ ತಳ್ಳುತ್ತೇವೆ. ಬಾಳಿನಲ್ಲಿ ಮಕ್ಕಳು ಮೊಮ್ಮಕ್ಕಳನ್ನು ಕಂಡು, ಹಣ್ಣಾಗಿ, ದಿನನಿತ್ಯದ ಕಾರ್ಯಗಳನ್ನು ಸ್ವತಂತ್ರವಾಗಿ ಮಾಡಲಾಗದೆ ಸಾವನ್ನು ಎದುರು ನೋಡುವವರಿಗೆ ಅದು ಲಭಿಸದಿರಬಹುದು. ನಾನಾ ರೋಗಗಳಿಂದ ಬಳಲಿ, ನೋವನ್ನು ಅನುಭವಿಸುತ್ತಾ, ಕೃತಕ ಸಾಧನಗಳ ಆಧಾರದ ಮೇಲೆ ಜೀವಿಸುತ್ತಾ, ಸಾಯಲಾಗದೆ ಬದುಕಲಾಗದೆ ಹೆಣಗಾಡುವ ಜೀವಗಳದೆಷ್ಟೋ! ಜೀವನ ಆನಂದಿಸುತ್ತ ಸಾವನ್ನು ಕನಸು ಮನಸ್ಸಿನಯಲ್ಲಿಯೂ ಆಲೋಚಿಸದವರು ಮರಣ ಹೊಂದುವುದನ್ನು ದಿನನಿತ್ಯ ವಾರ್ತೆಗಳಲ್ಲಿ,ಪತ್ರಿಕೆಗಳಲ್ಲಿ ನೋಡುತ್ತಿರುತ್ತೇವೆ. ಇದು ನಾಮಗಾಗದು ಎಂಬ ಭ್ರಮೆಯಲ್ಲಿಯೇ ಜೀವಿಸುತ್ತೇವೆ. ಆ ಭ್ರಮೆ ಇರದಿದ್ರೆ ಬಾಳನ್ನ ಬಹುಶಃ ಸವಿಯಲಾಗದೇನೋ? ಆದಿ ಅಂತ್ಯ ಕಂಡವರಾರು? ಹುಟ್ಟುವ ಮೊದಲು ಹಾಗೂ ಸಾವಿನ ನಂತರ ಕಂಡವರಾರು. ಅದಿರಲಿ ಹುಟ್ಟು ಸಾವಿನ ಮಧ್ಯ ಇರುವ ಬಾಳ ಅರಿತವರಾರು? ಅದಿರಲಿ. ಸಾಯಲಾಗದೆ ಬದುಕಲಾಗದೆ ಇರುವವರಿಗೆ ಇಚ್ಛಾ ಮರಣ ವರವೆ. ಆಕಾಲದಲ್ಲಿ ಬರುವ ಕಾಲನನ್ನು ತಿರುಗಿ ಕಳುಹಿಸಿ ಕಾಲನಿಂದಲೇ ಕಾಲಾವಕಾಶವನ್ನು ಪಡೆವ ಕಾಲ ಬರಬಹುದೆ? ಬಂದರದು ಮನು ಕುಲಕೆ ಹಿತವೇ? ಅದಿರಲಿ. ಭೀಷ್ಮ ಇಚ್ಛಾ ಮರಣಿಯಾದರೂ ಕೊನೆಗಾಲದಲ್ಲಿ ನೋವನ್ನು ಅನುಭವಿಸುತ್ತ ಶರ ಶಯ್ಯೆಯ ಮೇಲೆ ಮಲಗಿದನೇ ಹೊರತು, ಪ್ರಾಣ ತ್ಯಾಗ ಮಾಡಲಿಲ್ಲ. ಉತ್ತರಾಯಣ ಬರುವವರೆಗೂ ಕಾದ. ಮರಣದ ನಂತರದ ಸ್ವರಗಕ್ಕಾಗಿ. ವೀರ ಮರಣ ಹೊಂದಿದವರೆಲ್ಲ ಸ್ವರ್ಗ ಸೇರುತ್ತಾರೆ ಎಂದು ಹೇಳುತ್ತಾರೆ. ದುರ್ಯೋಧನನಿಗೆ ಸಹ ಸ್ವರ್ಗ ಪ್ರಾಪ್ತಿಯಾಯಿತು. ಆದರೆ ಭೀಷ್ಮ ಅದೇ ಸ್ವರಗಕ್ಕಾಗಿ ೫೮ ದಿನ ಬಾಣಗಳ ಹಾಸಿಗೆಯ ಮೇಲೆ, ನೋವನ್ನು ಅನುಭವಿಸುತ್ತ ಕಳೆದ. ಇಚ್ಛಾಮರಣ ಭೀಷಮನಿಗೆ ವರವಾಯಿತೆ? ಆ ಮಹಾಶಯನಿಗೇ ಅದು ವರವಾಗದಿದ್ದಲ್ಲಿ ನಮಗಾದೀತೇ?

Saturday, February 11, 2023

ಕರ್ಣ

ಆಡಿಗಡಿಗೆ ನಡುನಡುಗಿ
ನೋಡುತಲಿ ತಿರುತಿರುಗಿ
ಮನದೊಳಗೆ ಮರಮರುಗಿ
ಕಂತಿಹ ಕುಂತಿ ಕೊರಗಿ.
 
ನಾಡಿನಾ ಗಡಿ ದಾಟಿ
ಕಾಡಿನ ಕಡೆಗೋಡಿ
ತನ್ನೊಡಲ ಕುಡಿಯ ತನ್ನ
ಮಡಿಲಲೊಳೆತ್ತಿ.
 
ರವಿಯ ಒಲವಿಂದ 
ಚಿಗುರಿಬಂದಿಹ ಕಂದ 
ರವಿಯು ಮುಳುಗಿರಲು 
ಬಾಳೆಲ್ಲ ಇರುಳು. 

ಇರುಳಿನಾ ನೆರಳಲ್ಲಿ 
ಕರುಳ ಬಳ್ಳಿಯನೆಲ್ಲಿ 
ತೊರೆದು ತೆರಳಲಿ ಎಲ್ಲಿ 
ಮೊರೆದು ಮರುಗಿದಳಲ್ಲಿ. 

ಗಂಗೆಯಾ ದಡ ಸೇರಿ 
ಕಂಬನಿಯ ನದಿ ಜಾರಿ 
ತೊರೆಯಲೇ ತೊರೆಯದಿರಲೆ? 
ದ್ವಂದ್ವದಲಿ ಮನವು ಮುದುರಿ. 

ಬಾಳೊಂದು ತನಗುಂಟು 
ಮಗುವಿಗೂ ಬಾಳುಂಟು 
ಬಳಿಯಲಿದ್ದರೆ ಹಾಳು 
ಇಬ್ಬರಾ ಬಾಳು. 

ಮಾನವೇ ಮಿಗಿಲಾಗಿ 
ಮಮತೆ ಮೆಲ್ಲನೆ ಕರಗಿ 
ಮನವು ವಜ್ರವೇ ಆಗಿ 
ಮಗನನೊಪ್ಪಿಸಿದಳು ಗಂಗೆಗೆ. 

ಯುಗಯುಗಗಳುರಿಳಿದರೂ 
ನೂರಾರು ಕರ್ಣರು ಕುಂತಿಯರು 
ಇನ್ನೂ ಜನಿಸಿರುವ 
ನಮ್ಮ ಮಹಾಭಾರತವೇ ಧನ್ಯ.

Saturday, April 06, 2019

ಸಿಸಿಟಿವಿ

ಸಾವಿರಾರು ಕಣ್ಣಲ್ಲದ ಕಂಗಳು

ಎಡೆಬಿಡದೆ ಎವೆಇಕ್ಕದೆ ನೋಡುತಿರುವವು

ಕಣ್ಣ ಹಿಂದಿನ ದೊಡ್ಡಣ್ಣ

Sunday, June 14, 2015

Philosophy in Sports

Sports are physical. They can be philosophical too. Only the perspective from which we look at has to change.
Take the example of football. It is an intense physical and probably an emotional game. But if one think philosophically about the game a new vision emerges.

1. The aim of the entire team is to put the ball in the opposite teams goal - that is the goal. It seems some times that the team passes the ball in the opposite direction but this does not mean that the team has lost focus. One may have to sometimes move back to attack and achieve the goal.
2. None of the goals scored in any match are comparable to one another. Each one is different. The goal is the same, but there are many ways how one can achieve it. There is no harm as long as one achieves it within the laid rules of the game. In fact the probability of repeating the same set of events in real life seems very slim even by chance and may be possible only in the replay. If one is not flexible regarding the pathway towards the final goal, then one is sure to miss golden opportunities. One can take various paths as long as the focus is on the goal.

Let's now take the example of Cricket:
The batsman who faces the ball cannot strike every ball in a similar fashion. He has to be prepared for any kind of ball, but he keeps a close eye on the bowlers' action to anticipate the delivery. Within the short span of time he has to decide and select an appropriate stroke to survive and score runs. Instead if he predetermines the stroke even before the ball is delivered the chances that he will fail to connect the ball are higher. That will be a wasted effort. One has to be open to the situation, assess and take an appropriate action to survive and be successful. The same mantra is not suitable for all situation. Decision taken after assessing the situation has higher probabilities of being successful than predetermined ones.

There are always lessons to be learnt even from the trivial events that occur around us. One should only be open to them to experience them.

Thursday, December 18, 2008

ಯಂತ್ರ

ಬೇಂದ್ರೆಯಂತೆ ಬೇಯಲೆಂದು
ನಾಡನುಡಿಯ ಕೇಳಲೆಂದು
ನಡೆನಡೆಯುತ ಬಂದೆನು

ಬಿಸಿಲ ಬೇಗೆ ಬಸ್ಸ ಹೊಗೆ
ಅಟ್ಟಹಾಸಿ ಕಾರ ವಿಕಾರ ನಗೆ
ಬೆಳಗು ಬೈಗಿನುದ್ದಕೂ ಬೈಕ ಭರಭರ
ಕೊರಳಿರದ ಕಂಠಗಳ ಭೀಕರ ಹೂಂಕಾರ

ತುಟಿಗಳಾಡುತಿದ್ದರೂ ಮಾತು ಕೇಳದಾದವು
ಹೊರಟ ದನಿಗಳಲ್ಲಲ್ಲೇ ತಾವು ಸತ್ತು ಬಿದ್ದವು
ಶ್ರವಣವಿಲ್ಲ ಶ್ರಾವಣವಿಲ್ಲ ಎಲ್ಲ ಒಣ ಒಣ
ಮಾತು ಮೂಕವಾಯಿತಲ್ಲ ಎಲ್ಲ ಭಣಭಣ

ಒಂದು ಚೂರು ಬೇಯಲಿಲ್ಲ
ಬಳಲಿ ಬೆಂಡಆದೆನು
ಅನುಭವದಭಾವದಲಿ
ಕನಲಿ ಕವನ ಕಾರಿದೆನು.

ಮುಂಬೈ ಮಾರಿ

ಮುಂಬೈಯ ಬಾತ ಬಾಯಿ
ಬಾಯ್ಮುಂದ ಮಾತ ಮಾಯಿ

"ತಾಜಿ"ನ ತಾಜಾ ತೇಜ
ಕೆಡುಕೀಗೆ ಒಡಕ ಗಾಜ
ಆ "ನಾರಿ ಮಾನ" ಮಾರಿ
"ತ್ರಿನೀತಿಗೆ" ಭೀತಿ ಬೀರಿ

ಇರುಳಿನಲಿ ನುಸುಳಿ ಅರಿಯು
ಗುರಿಯಿರದೆ ಗುಂಡಗರೆದು
ಅರಿವಿರದ ನರರ ಮೇಧ
ಅರಿವಳಿದು ತಿಳಿವು ಕಳೆದು

ಹೊರೆಯಣ್ಣ ನೆರೆಯ ಪಾಕ
ನೆರೆವಿಗೆಲಾ!"ವಂಗ"ಪಾಕ
ಪಾಕಿನ ಪಾಕ ಮಾಡಿ
ಕೈ-ಕಮಲ-ಕುಡುಗೋಲು ಕೂಡಿ?

ನರೇಂದ್ರನುಡಿಗಿಲ್ಲ ಖಬರು
ಅಚ್ಯುತ ಪಟ್ಟ-"ಪಟ್ಟಿ" ಪೊಗರು
ವಿಜಯವೇ ಹೇಮಂತರಿಗೆ?
ಅಶೋಕವೇ ಸಂದೀಪರಿಗೆ?

ಕಾದಿಹೆವು ಕಾದುವೆವು ಕೊರಗದಿರಿ
ಸಂಹರಿಸಿ ಮಡಿದರೂ ಮರುಗದಿರಿ
ಅಟ್ಟುವೆವು ಮೆಟ್ಟುವೆವು ನಾವು ಬಲವಂತ
ಆದರೀ, ಸರಕಾರೀ ಅಪಚಾರ ಬೇಡ ಭಗವಂತ!!!



Saturday, September 20, 2008

ಜೀವನ ಚಕ್ರ

ತಿರುಗುತಿದೆ ಜೀವನ ಚಕ್ರವೆನ್ನುವರು
ತಿರುಗಿಸಿದರೆ ತಿರುಗಿ ಬರುವವೇ ಅವೇ
ಆಳ ತಿಳಿಯದೋದಿದ ಹಾಳೆಗಳು
ನಾಳೆ ನೆನ್ನೆಗಳಾಗುವವೇ ಮರಳಿ
ಮರಳಿದರೆ ಮರಳುವವೇ ಹೇಳು ಮರುಳಾ.

Sunday, August 24, 2008

ರಾಜಕೀಯ

ಹೆಸರಿರುವ ಗುರಿಯರಿಯದ
ನಾಯಕನಡಿಗೆ
ಹೆಸರಿಲ್ಲದ ಗುರಿಯಿಲ್ಲದ
ಜನರ ಸೇರಿಸಿದರೆ
ಹುಟ್ಟುವ ಕ್ಷಣಿಕ ಪಾರ್ಟಿ ಚಿರಂಜೀವಿಯೆ?